ಜಿಲ್ಲಾ ಆಡಳಿತ  -
ಆಡಳಿತ, ಚುನಾವಣೆ ಮುಂತಾದ ಉದ್ದೇಶಗಳಿಗಾಗಿ ಒಂದು ರಾಜ್ಯ, ನಗರ, ಪಟ್ಟಣ ಮುಂತಾದುವುಗಳಲ್ಲಿ ಮಾಡಲಾದ ವಿಭಾಗಗಳನ್ನು ಜಿಲ್ಲೆಗಳೆಂದು ಕರೆಯುವುದಿದೆ. ಭಾರತದಲ್ಲಿ ಆಡಳಿತ ಸೌಕಂiÀರ್iಕ್ಕಾಗಿ ಒಂದೊಂದು ರಾಜ್ಯವನ್ನೂ ಹಲವು ಜಿಲ್ಲೆಗಳಾಗಿ ವಿಂಗಡಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ನಾಲ್ಕು ಆಡಳಿತ ವಿಭಾಗಗಳೂ ಒಂದೊಂದು ವಿಭಾಗದಲ್ಲೂ ಹಲವು ಜಿಲ್ಲೆಗಳೂ ಇವೆ. ಪ್ರತಿಯೊಂದು ಜಿಲ್ಲೆಗೂ ಅದರದೇ ಆಡಳಿತ ವ್ಯವಸ್ಥೆ ಇರುತ್ತದೆ. ಅದಕ್ಕೆ ಒಬ್ಬ ಜಿಲ್ಲಾಧಿಕಾರಿ ಇರುತ್ತಾನೆ. ಜಿಲ್ಲೆಗೆ ಸಂಬಂಧಿಸಿದ ಎಲ್ಲ ಆಡಳಿತ ವಿಚಾರಗಳಿಗೂ ಜಿಲ್ಲಾಧಿಕಾರಿಯೇ ಜವಾಬ್ದಾರ. ಜಿಲ್ಲೆಯಲ್ಲಿ ಕಂದಾಯ ವಸೂಲಿ, ಕಾನೂನು ಮತ್ತು ಶಾಂತಿ ಪಾಲನೆ ಮತ್ತು ಜಿಲ್ಲೆಗೆ ಸಂಬಂಧಪಟ್ಟ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಜಿಲ್ಲಾಧಿಕಾರಿ ನೆರವೇರಿಸಬೇಕು. ಅವನ ಕೆಲಸದಲ್ಲಿ ನೆರವಾಗಲು ಪೋಲಿಸ್ ಮೇಲ್ವಿಚಾರಣಾಧಿಕಾರಿ, ಜಿಲ್ಲಾ ವಿದ್ಯಾಧಿಕಾರಿ, ಜಿಲ್ಲಾ ವೈದ್ಯಾಧಿಕಾರಿ, ಜಿಲ್ಲಾ ಅಭಿವೃದ್ಧಿ ಅಧಿಕಾರಿ ಮೊದಲಾದ ಅಧಿಕಾರಿಗಳಿರುತ್ತಾರೆ. ಪ್ರತಿಯೊಂದು ಜಿಲ್ಲೆಯನ್ನೂ ಕೆಲವು ಉಪವಿಭಾಗಗಳನ್ನಾಗಿ ವಿಂಗಡಿಸಲಾಗಿರುತ್ತದೆ. ಪ್ರತಿಯೊಂದು ಉಪವಿಭಾಗಕ್ಕೂ ಒಬ್ಬ ಸಹಾಯಕ ಅಧಿಕಾರಿ ಇರುತ್ತಾನೆ. ಅವನು ಜಿಲ್ಲಾಧಿಕಾರಿಯ ಅಧೀನದಲ್ಲಿದ್ದು ಉಪವಿಭಾಗದ ಆಡಳಿತ ನಡೆಸಲು ಸಹಾಯಕನಾಗುತ್ತಾನೆ. ಉಪವಿಭಾಗವನ್ನು ತಾಲ್ಲೂಕುಗಳಾಗಿ ವಿಂಗಡಿಸಲಾಗಿರುತ್ತದೆ. ತಾಲ್ಲೂಕಿನ ಅಧಿಕಾರಿ ತಹಶೀಲ್ದಾರ. ಅವನಿಗೆ ಸಹಾಯ ಮಾಡಲು ಪ್ರತಿ ತಾಲ್ಲೂಕಿನಲ್ಲೂ ವಿವಿಧ ಇಲಾಖೆಗಳಿಗೆ ಸೇರಿದ ಅಧಿಕಾರಿಗಳಿರುತ್ತಾರೆ. ತಾಲ್ಲೂಕಿನ ವಿಭಾಗಗಳು ಹೋಬಳಿಗಳು. ಹೋಬಳಿಯಲ್ಲಿ ರೆವಿನ್ಯೂ ಅಧಿಕಾರಿಗಳೂ ಪೋಲಿಸ್ ಅಧಿಕಾರಿಗಳೂ ಇರುತ್ತಾರೆ. ಹೋಬಳಿ ಹಲವು ಗ್ರಾಮಗಳನ್ನೊಳಗೊಂಡ ವಿಭಾಗ. ಗ್ರಾಮಗಳಿಗೆ ಸಂಬಂಧಿಸದ ಕಾರ್ಯ ನಿರ್ವಹಿಸಲು ಗ್ರಾಮಾಧಿಕಾರಿಗಳಿರುತ್ತಾರೆ.
(ಎಂ.ಕೆ.ಆರ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ